-ಅಂದು ಭುವಿಗೂ-ಬಾನಿಗೂ ಹಬ್ಬದೌತಣ
- Maneesha M.S
- Aug 3, 2020
- 2 min read

ಮಲೆನಾಡ ಮಗಳು ಬಂಟಮಲೆಯ ಬುಡದಲ್ಲಿನ ಮೂರಂಕಣದ ಹಂಚಿನ ಮನೆ ನನ್ನದು. ಆಗ ತಾನೇ ಕಾರ್ತಿಲ್ ತಿಂಗಳ ಆರಂಭ. ಬೇಸಿಗೆಯ ಧಗೆಗೆ ಖಾದು ಕೆಂಪಾಗಿದ್ದ ನಮ್ಮ ತೋಟದ ಅಡಿಕೆ ಮರಗಳು ವರ್ಷಧಾರೆಗೆ ಹಾತೊರೆಯುತ್ತಿತ್ತು. ನಾನು ಕೂಡ ಅಷ್ಟೆ! ಮೊದಲ ಮಳೆಗೆ ಬೀಳುವ ಪ್ರಾಕೃತಿಕ ಸ್ಫಟಿಕ ಆಲಿಕಲ್ಲಿನ ಆಗಮನವನ್ನು, ನಂತರದ ಮಳೆಗಾಲದ ಆಟಗಳನ್ನು ಕುಶಲತೆಯಿಂದ ಕಾಯುತ್ತಿದ್ದೆ.
ಆಗ ತಾನೆ ಅಮ್ಮ ಹೇಳಿದ ಶಾಲೆ ಪುನರಾರಂಭದ ಸಂಗತಿಯಿಂದ ನನ್ನ ಮನದಲ್ಲಿ ಮಹನ್ಮೌನ ಆವರಿಸಿತ್ತು. ನನ್ನ ಆ ಕವಿದ ಮನಕ್ಕೆ, ಆಲಸಿ ಶರೀರಕ್ಕೆ ಸುಮನೋಹರ ತರಿಸಿದ್ದು, ಮನೆಯ ಹಂಚಿನ ಮೇಲೆ ಒಂದೊಂದಾಗಿಯೇ ಬೀಳುತ್ತಾ'ಫಟ್ ಪಟ್' ಎಂದು ಸದ್ದು ಮಾಡಿದ ಮುಗಿಲ ಬಿಂದುವಿನ ನಾದ. ಅದು ಮೊದಲ ವರ್ಷಧಾರೆ. ಭುವಿಗು - ಬಾನಿಗು ಅಂದು ಹಬ್ಬದ ಸಂಭ್ರಮ. ನನಗೂ ಕೂಡ, ಅವಶ್ಯವಾಗಿ!
ಮೊದಲ ಮಳೆಗೆ ಹೊಮ್ಮಿದ್ದ ಮಣ್ಣಿನ ಕಂಪು, ಹಾಡುತ್ತಿದ್ದ ಕೋಗಿಲೆಯ ಇಂಪು, ಮುಂಜಾವಿನ ಇಬ್ಬನಿಯ ತಂಪು, ನಲಿಯುತ್ತಿದ್ದ ದುಂಬಿಗಳ ಜೊಂಪು, ಮೇಘಗಳ ಕಪ್ಪು- ಬಿಳುಪು,
ಬೇಲಿಯ ದಂಟಲ್ಲಿ, ಕಂಪೌಡಿನ ಕಲ್ಲುಗಳಲ್ಲಿ ಹಸಿರು ಉಕ್ಕಲು ಶುರುಮಾಡಿತ್ತು. ಮಳೆಯಲ್ಲಿ ಮಿಂದ ಚಟ್ಟಿಯ ಹೂವುಗಳೆಲ್ಲ ಪರಿಪರಿಯಾಗಿ ನಾಚುತ್ತಿತ್ತು.ಬೇಸಿಗೆಯಲ್ಲಿ ಸೆಗಣಿ ಸಾರಿಸಿ ನಿಂಪಾಗಿದ್ದ ನಮ್ಮ ಅಂಗಳ ಬಾದಾಗೆ ಹೋಯ್ತು. ಬಾವಿಯ ಪಕ್ಕ ಇದ್ದ ಕಲ್ಲಿನ ಸಂದಿಯಿಂದ ದೊಡ್ಡ ಡೊಂಕುರು ಕಪ್ಪೆ ಆಗಲೇ ಜಿಗಿಯಲು ಶುರುಮಾಡಿತ್ತು. ಮಳೆ ಗಾಳಿಗೆ ಅಡಿಕೆ ಮರಗಳೆಲ್ಲ ಒಂದಕ್ಕೊಂದು ಆಲಿಂಗನ ಕೊಡುವಂತೆ ತೂರಾಡುತ್ತಿದ್ದವು. ಅಷ್ಟರಲ್ಲಿ ಗಾಳಿಯ ರಭಸಕ್ಕೆ ದನದ ಕೊಟ್ಟಿಗೆ ಮೇಲೆ ಬಿದ್ದ ತೆಂಗಿನ ಮರದ ಗರಿಯು 'ದೊಪ್' ಎಂದು ಶಬ್ಧ ಮಾಡಲು ಮೆಲುಕು ಹಾಕುತ್ತಾ ಕುಳಿತಿದ್ದ ನಮ್ಮ ಕಾಳಿ ಹಸು ಹೆದರಿ ಎರೆಡು ಬಾರಿ ತಲೆ ಕೆದರುತ್ತ ಮುಂಗಾಲು ಒತ್ತಿ ಎದ್ದು ನಿಂತು ಮಳೆಯತ್ತ ಕಣ್ಣು ಹಾಯಿಸುತು. ಗೂಡಿನಲ್ಲಿದ್ದ ಜಿಮ್ಮಿ ನಾಯಿ ಗುಡುಗಜ್ಜನಿಗೆ ಸವಾಲು ಹಾಕುವಂತೆ ಘೂಳಿಡಲು ಮುಂದಾಯಿತು. ನಿದ್ದೆಯ ಮಂಪರಿನಲ್ಲಿದ್ದ ನಮ್ಮ ಬೆಕ್ಕು ಮಾತ್ರ ಆರಾಮವಾಗಿ ಒಲೆ ಬುಡದಲ್ಲಿ ಬಿಸಿಕಾಯಿಸುತ್ತ ಮುಖ ಶುದ್ಧ ಮಾಡುವ ಕಾರ್ಯದಲ್ಲಿ ಮಗ್ನವಾಗಿತ್ತು. ಒಟ್ಟಿನಲ್ಲಿ ನನಗಂತೂ ಇದು ಸ್ವರ್ಗಸದೃಶವಾಗಿತ್ತು.
ಮಳೆ ಶುರುವಾದ ಮೇಲೆ ದೋಣಿ ಮಾಡದಿದ್ದರೆ ಆಗುವುದೇ ಹೇಳಿ? ಹಳೆ ಮದುವೆ ಕಾಗದ ಹುಡುಕಿ ಅದರಲ್ಲಿ ಬೇರೆ ಬೇರೆ ಗಾತ್ರದ ದೋಣಿ ಮಾಡುವುದೇ ಒಂದು ಕೆಲಸ. ಮಾರನೇ ದಿನ ಸ್ನೇಹಿತರೊಡಸೇರಿ ತೋಟದ ಮಧ್ಯೆ ಹರಿಯುತ್ತಿದ್ದ ಚಿಕ್ಕ ತೋಡಿನಲ್ಲಿ ದೋಣಿ ಬಿಡುತ್ತಾ ನಮಗೆ ಅರಿಯದೆ ನಾವು ಅಂಬಿಗರಾಗುತ್ತಿದ್ದೆವು. ಕ್ಷಣದಲ್ಲಿ ದೂರದಲ್ಲಿ ಕಂಡ ಚಿಕ್ಕ ಮೀನಿನ ದಂಡನ್ನು ಬೇಟೆಯಾಡುವ ಹಂಬಲ. ತಿಳಿ ಪ್ಲಾಸ್ಟಿಕ್ ಚೀಲವನ್ನು ಮೌನವಾಗಿ ಮೀನಿನ ಬಳಿ ಕೊಂಡೊಯ್ದು ಪಟ್ಟನೆ ಮುಚ್ಚಿ ಎತ್ತಿದಾಗ ಅದೃಷ್ಟವಶಾತ್ ಒಂದು ಮೀನು ಸಿಕ್ಕರೂ ಪರಮಾನಂದ. ಮನ ಬಿಚ್ಚಿ ಚಪ್ಪಾಳೆ ತಟ್ಟುತ್ತ ಎರೆಡು ಬಾರಿ ನೆಗೆಯುತ್ತಿದ್ದೆವು. ಆಚೆ ಬದಿಯಲ್ಲಿ ಏಡಿ ಹಿಡಿಯಲು ಹೊರಟ ಅಣ್ಣನ ಹಿಂದೆ ಓಡಿ ಹೋಗಿ ಏಡಿ ಹಿಡಿದಿದ್ದೂ ಉಂಟು.
ನಮ್ಮಂತಹ ಎಳೆಯ ಮಕ್ಕಳಿಗೆ ನವೋಲ್ಲಾಸ ತಂದಂತೆ ಮನೆಯ ಹಿರಿಯರು ಕೂಡ ಈ ಮಳೆಯನ್ನು ಆನಂದಿಸುತ್ತಾರೆ ಎನ್ನುವುದು ಕಷ್ಟಸಾಧ್ಯ. ಅವರು ಈ ಜಡಿಕುಟ್ಟ ಮಳೆ ಆರ್ಭಟಕ್ಕೆ ಗೊಣಗಿಕೊಳ್ಳುವುದೆ ಜಾಸ್ತಿ. ನಮಗೆ ಮಕ್ಕಲಾಟಿಕೆಯಾದರೆ, ಅವರಿಗೆ ಹಾಗೇನೂ? ಖಂಡಿತ ಇಲ್ಲ. ನಾನು ದೋಣಿ ಬಿಟ್ಟು ಬರುವಷ್ಟರಲ್ಲಿ ಅವರು ತಮ್ಮದೇ ಆದ ಕಾರ್ಯದಲ್ಲಿ ತೊಡಗಿದ್ದರು. ಅಪ್ಪ ಮನೆ ಮುಂದೆ ಅಂಗಳದಲ್ಲಿ ಕಳೆಹುಲ್ಲು ಬಾರದಂತೆ ದೊಡ್ಡದೊಂದು ಟಾರ್ಪಾಲ್ ಹಾಕಿ ಅದರ ಮೇಲೆ ಅಲ್ಲೊಂದು ಇಲ್ಲೊಂದು ಸೋಗೆಯನ್ನು ಕಡೆದು ಹಾಕುತ್ತಿದ್ದರು. ಇನ್ನು ಅಡಿಗೆ ಮನೆಯಲ್ಲಿದ್ದ ಅಮ್ಮ ವಿದ್ಯುತ್ ಕಡಿತ ಮಾಡಿದ ಕೆ.ಇ.ಬಿ.ಯವರಿಗೆ ಬೈದಾಡುತ್ತ ರಾತ್ರಿಯ ಒಣಮೀನು ಸಾಂಬಾರಿಗೆ ಮಸಾಲ ರುಬ್ಬುತ್ತಿದ್ದರು. ನಡುಕೋಣೆಯಲ್ಲಿದ್ದ ಅಜ್ಜಿ ಮೂಲೆಯಲ್ಲಿ ಸೋರುತ್ತಿದ್ದ ಕಡೆ ಪಾತ್ರೆ ಇಡುವುದು ಮಾತ್ರವಲ್ಲದೆ ಗೊಣಗುತ್ತಾ ಬಾಯಿಗೆ ಕೊಡುವ ಕೆಲಸವಂತೂ ನಿಲ್ಲಿಸಿರಲಿಲ್ಲ. ಜೊತೆಗೆ ನನ್ನ ಕಡೆ ನೋಡುತ್ತಾ ಜೋರಾಗಿ ಕರೆದು ಆ ಒಗೆದ ಬಟ್ಟೆ ನೆನೀತ ಇದೆ ತಂದು ಒಳಗೆ ಹಾಕು ಎಂದು ಗಟ್ಟಿಧ್ವನಿಯಲ್ಲಿ ಗದರಿದರು. ಇದೊಂದೇ ವಿಷಯಕ್ಕೆ ನನಗೆ ಮಳೆಗಾಲವೆಂದರೆ ತುಸು ಕೋಪ. ಯಾಕೆಂದರೆ ಇಂದಿಗೂ ಆ ಕೆಲಸ ಮನಸ್ಸಿಲ್ಲದ ಮನಸಲ್ಲಿ ನಾನೇ ಮಾಡಬೇಕು.
ಇಷ್ಟೆಲ್ಲದರ ನಡುವೆಯೂ ಈ ಸುಂದರ ಸಂಜೆಯ ಭಾವೋದ್ವೇಗ ಹೆಚ್ಚಿಸಿದ್ದು ಅಜ್ಜ ಸುಡುತ್ತಿದ್ದ ಗೇರು ಬೀಜದ ಘಮ ಹಾಗೆಯೇ ಅಜ್ಜಿ ಹುರಿಯಿತ್ತಿದ್ದ ಹಲಸಿನ ಹಪ್ಪಳ. "ಮಳೆ-ಸುಟ್ಟಬೀಜ- ಹಲಸಿನ ಹಪ್ಪಳ-ಕರಿಚಹಾ" ಇದನ್ನು ಅನುಭವಿಸಿದವನಿಗೆ ಮಾತ್ರ ಗೊತ್ತು ಇದರ ಸ್ವಾದ. ಈ ಅಲ್ಪ ತಿಂಡಿಗೆ ಸೋದರ ಸಂಬಂಧಿಗಳೊಡನೆ ಕಚ್ಚಾಡುತ್ತ ನಮ್ಮ ಮನದಣಿವೆಲ್ಲಾ ನೀಗಿ ಬಿಡುತ್ತಿತ್ತು.
ಮಳೆಗಾಲದ ಈ ದಿನಚರಿ ಸುಮಾರು ಮೂರು-ನಾಲ್ಕು ತಿಂಗಳಿದ್ದರೂ ಯಾರು ಬೇಸರ ಹೊಂದುವುದಿಲ್ಲ. ಯಾಕೆಂದರೆ ಈ ವರ್ಷಧಾರೆ ನೊಂದ ಮನಸ್ಸಿಗೆ , ಬೆಂದ ಭೂಮಿಗೆ ಹಾಗೆ ಸಕಲ ಜೀವಜಂತುವಿಗೆ ವಾಸವಿಯಿಂದ ಸಿಗುವ ಸಾಂತ್ವಾನ. ಪ್ರಕೃತಿಯ ಪರದೆಯ ಮೇಲೆ ಕಂಡ ಈ ದೃಶ್ಯವ ನೋಡುತ ನೋಡುತ ಬೆಳೆದ ಮಕ್ಕಳಿಗೆ ಇದರಿಂದ ಬೇಸರವಾಗುವುದಾದರು ಹೇಗೆಲ್ಲವೆ? ಹೀಗಿದ್ದಲ್ಲಿ ಇಂದಿನ ಈ ಬೈಗು ಮಳೆಯ ನೋಡುತ್ತಿದ್ದಂತೆ, ಕಳೆದು ಹೋಗಿ ಬಹುದೂರವಾಗಿದ್ದ ನನ್ನ ಎಳೆಗಾಲದ ಭೂಮಿಕೆಗೆ ಪ್ರವೇಶಿಸದಂತಾಯ್ತು.








Comments