ಹೆಸರಿನಷ್ಟೇ ಸಿಹಿಯಾಗಿರುವ ಸಕ್ರೇಬೈಲು.
- Maneesha M.S
- Sep 7, 2021
- 1 min read
ಭೂಮಿಯಲ್ಲಿ ಕಾಣಸಿಗುವ ಸ್ವರ್ಗ ಎಂದೇ ಪ್ರಖ್ಯಾತವಾದ ಶಿವಮೊಗ್ಗದ ಮಡಿಲಲ್ಲಿರುವ ಒಂದು ಸರಳ ಹಾಗೂ ಸುಂದರವಾದ ಪ್ರೇಕ್ಷಣೀಯ ಸ್ಥಳ ಸಕ್ರೆಬೈಲು. ಶಿವಮೊಗ್ಗ ಬಸ್ ನಿಲ್ದಾಣದಿಂದ ತೀರ್ಥಹಳ್ಳಿ ಹೋಗುವ ಮಾರ್ಗದಲ್ಲಿ ಸುಮಾರು ಹದಿನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಸಕ್ರೆಬೈಲು ಆನೆ ಬಿಡಾರ ಕಾಣಸಿಗುತ್ತದೆ. ಸಕ್ರೆಬೈಲು ಆನೆಗಳ ಕ್ಯಾಂಪು ವನ್ಯಜೀವಿಗಳ ಬಗ್ಗೆ ಅತ್ಯಂತ ಕುತೂಹಲ ಹುಟ್ಟಿಸುವ ಅಲ್ಲದೆಯೇ ಪ್ರವಾಸಿಗರುಗಳನ್ನು ಏಕರೀತಿಯಲ್ಲಿ ಆಕರ್ಶಿಸುವ ಒಂದು ಸ್ಥಳ. ಅದು, ಬೃಹತ್ ಗಾತ್ರದ ಆನೆಗಳನ್ನು ಅತೀ ಸಮೀಪದಿಂದ ನೋಡುವ ಒಂದು ಅವಕಾಶವನ್ನು ಸಾಮಾನ್ಯ ಜನತೆಗೆ ನೀಡುವ ಕರ್ನಾಟಕದಲ್ಲಿನ ಪರಿಸರಸ್ನೇಹಿ-ಪ್ರವಾಸೋಧ್ಯಮ ಕೇಂದ್ರಗಳ ಪೈಕಿ ಒಂದಾಗಿದೆ
ಬೆಳಗ್ಗೆ 8 ಘಂಟೆಯಿಂದ ಮದ್ಯಾಹ್ನ 12 ಘಂಟೆಯ ತನಕ ಇಲ್ಲಿಗೆ ಭೇಟಿ ನೀಡಬಹುದಾದ ಸಮಯ. ತರಭೇತಿಯಲ್ಲಿರುವ ಆನೆಗಳನ್ನು ಈ ಹೊತ್ತಿಗೆ ಸ್ನಾನಕ್ಕೆಂದು ಮಾವುತರು ಕರೆತರುತ್ತಾರೆ. ಈ ದೈತ್ಯ ಜೀವಿಗಳು ತುಂಗಾ ತೀರದಲ್ಲಿ ಸ್ನಾನ ಮಾಡುತ್ತಾ ಆಡುವ ತುಂಟತನ ವೀಕ್ಷಕರನ್ನು ಪರಿ ಪರಿಯಾಗಿ ಆಕರ್ಷಿಸುತ್ತದೆ. ಮಾವುತರ ಮಾತಿನಂತೆ ನಡೆದುಕೊಳ್ಳುವ ಈ ಆನೆಗಳ ಸೌಮ್ಯತೆ ಪ್ರೇಕ್ಷಕರನ್ನು ಬೆಕ್ಕಸ ಬೆರಗು ಮಾಡಿಸುತ್ತದೆ. ನಾವು ಆನೆಯನ್ನು ಸ್ನಾನ ಮಾಡಿಸುವ ಅವಕಾಶವಿರುತ್ತದೆ. ವೀಕ್ಷಕರು ಹಾಗೂ ಆನೆಗಳ ಜೊತೆ ಸಂಭಾಷಣೆ ಅವಧಿಯೂ ಇರುತ್ತದೆ. ಹಾಗೆಯೇ ಇಲ್ಲಿಯ ಆನೆ ಸವಾರಿಯು ಪ್ರತಿ ಪ್ರವಾಸಿಯನ್ನು ಆನಂದತುಂದಿಲರನ್ನಾಗಿ ಮಾಡಿಸಿ ಬೀಳ್ಕೊಡುತ್ತದೆ. ಬಹು ಮುಖ್ಯವಾಗಿ ಚಿಕ್ಕ ಮಕ್ಕಳನ್ನು ಬಹು ಉತ್ಸುಕರನ್ನಾಗಿ ಮಾಡಬಲ್ಲ ಒಂದು ಸ್ಥಳ ಇದಾಗಿದೆ.
ಆನೆ ಫಳಗಿಸಲು ಇದೊಂದು ಉತ್ತಮ ವಾತಾವರಣ. ದಶಕಗಳ ಕಾಲದಿಂದಲೂ ರಾಜ್ಯದ ಪ್ರಸಿದ್ಧ ಬಿಡಾರವಾಗಿ ಸಾಕಷ್ಟು ಪುಂಡಾನೆಗಳನ್ನ ಪಳಗಿಸಿ ಸಲುಹಿದ ಬಿಡಾರದಲ್ಲಿ ಎರಡು ಮೂರು ತಲೆಮಾರಿನ ಕಾವಾಡಿ, ಮಾವುತರಿದ್ದಾರೆ. ಇಷ್ಟು ವರ್ಷಗಳಲ್ಲಿ ಈ ಬಡ ಕುಟುಂಬಗಳಿಗೆ ಗೌರವಧನ ತಲುಪುತ್ತಲೇ ಇದೆ. ಮೂಲತಃ ಬಾಂಗ್ಲಾದೇಶವರಾದ ಇವರನ್ನು ಮೈಸೂರು ಮಹಾರಾಜರು ಆನೆ ಸಾಕಾಣಿಕೆಗೆಂದೇ ಕರೆತಂದ ಬಳಿಕ ಇಲ್ಲೇ ನೆಲೆ ನಿಂತ ಇವರ ಮೂರನೇ ತಲೆಮಾರು ಈಗ ಆನೆ ತರಬೇತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಚಿಕ್ಕ ಚಿಕ್ಕ ಮರಿ ಆನೆಗಳಿಂದ ಹಿಡಿದು ಮುದಿ ಆನೆಗಳನ್ನು ಕಾಳಜಿಯಿಂದ ಸಾಕುವುದು ಮಾತ್ರವಲ್ಲದೆ, ಹಲವಷ್ಟು ಅಂಗವಿಕಲ ಆನೆಗಳನ್ನು ಮಕ್ಕಳಂತೆ ಪೋಷಿಸುವ ಈ ಮಾವುತರಿಗೆ ನನ್ನದೊಂದು ಸಲಾಮ್.
ಬಿಡುವಿನ ಸಮಯದಲ್ಲಿ ವೀಕ್ಷಿಸಲು ಸೂಕ್ತವಾದ ಸ್ಥಳ ಇದಾಗಿದೆ. ಅಂತೆಯೇ ಮನಸ್ಸಿಗೆ ಉತ್ಸುಕತೆ ತುಂಬಬಲ್ಲ ಸ್ಥಳವೂ ಹೌದು. ಸ್ಥಳ ಭೇಟಿಯ ನಂತರ ಪ್ರವೇಶ ದ್ವಾರದ ಪಕ್ಕದಲ್ಲಿರುವ Mr.Ballu ki bakery ಯಲ್ಲಿ ಫಿಲ್ಟರ್ ಕಾಫಿ ಸವಿದರೆ ಮನಸ್ಸು ಇನ್ನಷ್ಟು ಹಗುರವಾಗುವುದು ಖಂಡಿತ.










Comments