top of page

ಮಹಾಭಾರತ ಅಂದು ಇಂದು


ಜಾತಿ, ಮತ, ಪಂಥ, ಧರ್ಮಗಳನ್ನು ಮೀರಿ ಸರ್ವ ಜನಾಂಗಕ್ಕೂ ಚಿರಪರಿಚಿತವಾದ ಮಹಾನ್ ಪ್ರಸಂಗ "ಮಹಾಭಾರತ". ಈ ಮಹಾಭಾರತದ ಸೃಷ್ಟಿಗೆ ಮೊಳಕೆಯೇ ಪಾಂಚಾಲ ಪುತ್ರಿ ದ್ರೌಪದಿಗೆ ಒದಗಿದ ಶೋಷಣೆ. ಅಂದು ಈ ಶೋಷಣೆಯ ವಿಚಾರದಿಂದ ಮುಂಬರುವ ಹೆಣ್ಣು ಕುಲದ ಅವನತಿಗೆ ಕಾರಣವಾಗಕೂಡದು ಎನ್ನುವ ಸಂಕಲ್ಪದೊಂದಿಗೆ ಮಹಾಕಾಳಗ ಎದುರಿಸಿಲಾಯಿತು. ಸಹಸ್ರಾರು ಯೋಧರ ವೀರಗತಿಯಾಯಿತು. ಆನಂದಚಿದ್ಘನ, ಷಡೈಷ್ಚರ್ಯ ಪರಿಪೂರ್ಣ, ಚರಾಚರ ವಂದಿತ, ಪರಮ ಪುರುಷೋತ್ತಮ , ಮಾಧವ ಮಧುಸೂದನನ ದಿವ್ಯವಾಣಿಯು "ಶ್ರೀ ಮಧ್ಭಗವದ್ಗೀತಾ" ಎಂಬ ಪುಣ್ಯ ಗ್ರಂಥವಾಯಿತು.


ಕುಲವಧುವಿನ ರಕ್ಷಣೆ ಮಾಡಲು ಅಸಹಾಯಕರಾದ ವಂಶದ ಹಿರಿಯ ಭೀಷ್ಮ, ಗುರುವರ್ಯ ದ್ರೋಣ, ಮಹಾರಥಿ ದಾನಶೂರ ಕರ್ಣ, ಹೀಗೆ ಇನ್ನಷ್ಟು ಮತ್ತಷ್ಟು ಯೋಧರು ಅಧರ್ಮದ ತಪ್ಪಿಗೆ ಶಿರಬಾಗಿ ಮಡಿದರು. ಅಭಿಮನ್ಯುವಿನಂತಹ ಬಾಳಿ ಆಳಬೇಕಾಕಾದ ವೀರಪುತ್ರ ಜೇಷ್ಠ ಮಾತೆಯ ರಕ್ಷಣೆಗೆಂದು ಮುನ್ನುಗ್ಗಿ ವೀರಮರಣ ಹೊಂದಿದ. ಹದಿನೆಂಟು ದಿನದ ಬಿಡುವಿಲ್ಲದ ರಕ್ತದೋಕುಳಿಯೇ ನಡೆಯಿತು ಈ ಮಣ್ಣಿನಲ್ಲಿ! ಒಂದು ಹೆಣ್ಣಿಗಾಗಿ, ಭವಿಷ್ಯದ ಹೆಣ್ಣು ಜಾತಿಯ ರಕ್ಷಣೆಯ ಸೂಚನೆಗಾಗಿ.


ಆದರೆ ವಾಸ್ತವ ಭಾರತದಲ್ಲಿ ನಾನು ನೀವು ಕಂಡಂತೆ ಇದರಿಂದೇನಾದರು ಉಪಯೋಕ್ತಿ ಕಾಣಿಸುತ್ತಿದೆಯೆ? ಕಾಣದ ಆ ಯುದ್ಧದ ತತ್ವಗಳು ಕಣ್ಮುಂದೆ ಇದ್ದರೂ ಕುರುಡು ಪ್ರಪಂಚಿಗರಾಗಿದ್ದೇವೆ. ವಸ್ತುತಃ, ಒಂದಲ್ಲ ಎರಡಲ್ಲ ವರ್ಷಕ್ಕೆ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಒಂದೆರೆಡು ದಿನ, ಹೀಗಾಗಬಾರದಿತ್ತು ಎನ್ನುವ ಬೇಸರ ವ್ಯಕ್ತಪಡಿಸುತ್ತೇವೆ. ದಾರಿಹೋಕರಿಗೆ ಹರಟೆಗೆ ಒಂದು ವಿಷಯ ಸಿಕ್ಕಂತಾಗಿ ಒಂದಕ್ಕೆ ಮತ್ತೊಂದು ಸೇರಿಸಿ ಮಾತನಾಡುತ್ತಾರೆ. ಟಿವಿ ಮಾಧ್ಯಮಕ್ಕೆ ಮೂರು ಹೊತ್ತು ವಿಧ ವಿಧ ರೀತಿ ವಾರ್ತೆ ಮಾಡಲು ಅನುಮೋದ ಸಿಕ್ಕಂತಾಗುತ್ತದೆ. ಇನ್ನು ಬಿಸಿರಕ್ತ ಯುವಕರಂತೆ ಬಿಂಬಿಸುವವರ ಪೌರುಷ ವಾಟ್ಸಾಪ್ ಸ್ಟೇಟಸ್ ಗಳ ಅಡ್ಡಗೋಡೆಯ ಮಧ್ಯ ಉಳಿದು ಬಿಡುವುದು ಹೊರತಾಗಿ ಕನಿಷ್ಟ ಪಕ್ಷ ಅಂಗಳದಾಚೆಯೂ ಅವರ ಕಿಡಿ ದಾಟುವುದು ಕಂಡು ಬರುತ್ತಿಲ್ಲವೆನ್ನುವುದು ಕಹಿಸತ್ಯ.


ಇನ್ನು ಇತ್ತೀಚೆಗೆ ನಡೆದ ಯುವತಿಯ ವಿಚಾರದಲ್ಲಿ ನಾ ಗಮನಿಸಿದಂತೆ ನನಗೆ ಕಂಡುಬಂದ ಬಹಳ ವಿಷದ ವಿಚಾರ, ಈ ಅತ್ಯಾಚಾರದಂತಹ ವಿಷಯದಲ್ಲೂ ರಾಜಕೀಯ ಮುಖಂಡರು ನಡೆಸುತ್ತಿರುವ ಒಳ ಗಲಭೆಗಳು ಹಾಗೂ ಅಂತರ್ಜಾಲದಲ್ಲಿ ಒಬ್ಬರಿಗೊಬ್ಬರು ಪ್ರತಿಯೇಟು ಕೊಡುವ ಅಸಂಬದ್ಧ ಟ್ವೀಟ್ ಗಳು. ಒಂದು ಅಸಹನೀಯ ವಿಚಾರದ ಪ್ರಸ್ತಾಪವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ವಿರೋಧ ಪಕ್ಷವೆಂದು ಅತಿಶಯೋಕ್ತಿ ಕಿತ್ತಾಡುವುದು ಎಷ್ಟರ ಮಟ್ಟಿಗೆ ಸರಿ?


ಇನ್ನೊಂದು ವಿಷಯವೆಂದರೆ, ಈ ರೀತಿಯ ಪ್ರಕರಣಗಳು ನಡೆಯಲು ಕಾರಣ ಹೆಣ್ಣು ಮಕ್ಕಳ ಅಸಭ್ಯತೆ ಎನ್ನುವುದು ಹಲವು ಬುದ್ದಿಜೀವಿಗಳ ತರ್ಕ ಮತ್ತು ಉಮೇದು ಕೂಡ ಹೌದು. ಇರಬಹುದೇನೋ! ಆದರೆ ಕೇವಲ ಇದೊಂದೇ ಕಾರಣ ಖಂಡಿತವಾಗಿಯೂ ಅಲ್ಲ.


ಒಂದು ಗಂಡು ಹೆಣ್ಣುವಿನ ಕೂಡುವಿಕೆ ವಿಶ್ವಗೌರವಭಾಜನವಾದ ಜಗತ್ಭವ್ಯ ಘಟನೆ ಎಂದು ಗುರತಿಸಲ್ಪಡುತ್ತದೆ. ಆದರೆ ಈ ರೀತಿಯ ಅನಾಚಾರ ನಡೆದಾಗೆಲ್ಲ ಹೆಣ್ಣಿನ ಅಸಭ್ಯತೆ ಎಂದು ಪರಿಗಣಿಸುವುದು ಸರಿಯಲ್ಲ. ಪರಸ್ತ್ರೀಯೊಬ್ಬಳನ್ನು ಸುಸಂಸ್ಕೃತ ದೃಷ್ಟಿಯಿಂದ ಕಾಣದೆ ಇರುವುದರಿಂದಲೂ ಈ ರೀತಿಯ ಸನ್ನಿವೇಶ ಉಗಮವಾಗುತ್ತದೆ. ಇದರಿಂದ ಪೋಷಕರು ಮಕ್ಕಳನ್ನು ಸರಿಯಾದ ರೀತಿ ಬೆಳೆಸದ ಕಾರಣ ಈ ರೀತಿಯ ಪ್ರಕರಣಗಳು ನಡೆಯುತ್ತಿದೆ ಎನ್ನುವುದು ಕೂಡ ತಪ್ಪು. ಸರಕಾರದಿಂದ, ಆಡಳಿತ ಪಕ್ಷಗಳಿಂದ, ಸಂಘ ಸಂಸ್ಥೆಗಳಿಂದಲೂ ಈ ಕೃತ್ಯಕ್ಕೆ ಮುಕ್ತಿ ಕೊಡುವುದು ಕಷ್ಟಸಾಧ್ಯ. ಇನ್ನೂ ಕತ್ತಿ ಗುರಾಣಿ ಹಿಡಿದು ಮಹಾಭಾರತ ಮಾಡಲಾಗುವುದೇ? ಇಲ್ಲ. ಆದರೆ ಮಹಾಭಾರತ ದಲ್ಲಿ ನೀಡಿದಂತಹ ಶಿಕ್ಷೆಯ ಪ್ರತಿರೂಪವನ್ನು ನಾವು ಅಳವಡಿಸಬಹುದಲ್ಲವೇ? ದುರ್ಯೋಧನ ದುಶ್ಯಾಸನರಿಗೆ ನೀಡಿದ ಶಿಕ್ಷೆಯ ಪ್ರತಿ ಇಂದಿನ ಆರೋಪಿಗಳಿಗೆ ಯಾಕೆ ನೀಡಲಾಗುತ್ತಿಲ್ಲ? ಕೃಷ್ಣನಂತಹ ಸಾರಥಿ ಇಲ್ಲವೆಂದೇ? ಬಿಡಿಸಲಾಗದ ಕಟು ಒಗಟಿನಂತಾಗಿದೆ ಈ ವಿಚಾರ.


ಒಂದು ವಿಷಯವಂತೂ ಸ್ಪಷ್ಟ, ಹೆಣ್ಣಾಗಲೀ ಗಂಡಾಗಲೀ ತನ್ನ ವೈಯಕ್ತಿಕ ಹತೋಟಿ ಮತ್ತು ಭಾವನಾ ನಿಯಂತ್ರಣಕ್ಕೆ ಸ್ವಯಂ ಸೃಷ್ಠಿತ ಗಡಿ ರೇಖೆಯನ್ನು ನಿರ್ಮಿಸುವುದರಿಂದ ಖಂಡಿತವಾಗಿಯೂ ಇಂತಹ ಅಸಹನೀಯ ವಿಚಾರಕ್ಕೆ ಪೂರ್ಣವಿರಾಮ ಹಾಕಬಹುದು.

2 Comments

Rated 0 out of 5 stars.
No ratings yet

Add a rating
Maneesha M.S
Maneesha M.S
Oct 09, 2020

ಸತ್ಯ ವಿಚಾರ... ಆದರೆ ಧರ್ಮ ಸಂಸ್ಥಾಪನೆ ಮಾಡುವ ವಿಚಾರ ಕಡೆಗಣಿಸುತ್ತಿರುವುದು ವಿಷದ ಸಂಗತಿ

Like

Sanjeev Patel
Sanjeev Patel
Oct 09, 2020

ಯುಗಯುಗ ಕಳೆದರೂ ಹೆಣ್ಣಿನ ಮೇಲಿನ ಶೋಷಣೆ ಯಂತೂ ನಡೆಯುತ್ತಲೇ ಇದೆ. ಕುರುಕ್ಷೇತ್ರ ದಂತಹ ಮಹಾ ಯುದ್ಧ ಒಂದು ಹೆಣ್ಣಿನ ಮೇಲಿನ ಶೋಷಣೆಯ ಪ್ರತಿಕಾರ ಮತ್ತು ಅದಕ್ಕೆ ಪ್ರತ್ಯುತ್ತರ.


ಅಂತಹ ಪ್ರತೀಕಾರ ಮತ್ತು ಪ್ರತ್ಯುತ್ತರವಾಗಿ ಕುರುಕ್ಷೇತ್ರದ ಮೂಲಕ ಧರ್ಮವನ್ನು ಪುನರ್ಸ್ಥಾಪಿಸಿದ ಕೃಷ್ಣ ಖಂಡಿತ ನಮ್ಮೊಳಗೇ ಇದ್ದಾನೆ. ಈ ಕಲಿಯುಗದಲ್ಲಿ ನಮ್ಮೊಳಗಿನ ದುರ್ಯೋಧನನನ್ನ ಮಣಿಸಿ ಧರ್ಮ ಸಂಸ್ಥಾಪನೆಯ ಕೃಷ್ಣ ವಾಣಿಯನ್ನು ನಮ್ಮೊಳಗೆ ಸ್ವತಹ ನಾವೇ ಮೊಳಗಿಸಿ ಕೊಂಡರೆ ಹೆಣ್ಣಿನ ಮೇಲಿನ ಶೋಷಣೆಯು ತನಗೆ ತಾನೇ ಕೊನೆಯಾಗುತ್ತದೆ.


ಧರ್ಮ ಸಂಸ್ಥಾಪನೆಯನ್ನು ನಮ್ಮೊಳಗೆ ಮಾಡಬೇಕಷ್ಟೇ.

Like

Subscribe Form

Thanks for submitting!

7795889049

©2020 by NewsNow.

bottom of page